ಮಳೆಗಾಲದಲ್ಲಿ ಕೃಷಿಕರು ಸಿಡಿಲಿನ ಬಗ್ಗೆ ತಿಳಿಯಬೇಕಾದ ಅನಾಹುತಗಳು ಹಾಗೂ ಮುಂಜಾಗ್ರತಾ ಕ್ರಮಗಳು .!
ಸಿಡಿಲಿನಿಂದಾಗುವ ಅನಾಹುತಗಳು;
ಜಗತ್ತಿನಾದ್ಯಂತ ಸಿಡಿಲಿನ ಆಘಾತದಿಂದ ಸಾವಿರಾರು ಸಂಖ್ಯೆಯ ಜನರು ಸಾಯುತ್ತಾರೆಂದೂ, ಅಸಂಖ್ಯಾತ ಜನರು ಗಾಯಗೊಳ್ಳುವರೆಂದೂ ತಿಳಿದುಬಂದಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 2200 ರಿಂದ 2500 ಜನ ಸಿಡಿಲಿನಿಂದ ಸಾವನ್ನಪ್ಪುತ್ತಾರೆಮದು ಅಂದಾಜಿಸಲಾಗಿದೆ. ಭಾರತದಲ್ಲಿ ಸಿಡಿಲು ಅತ್ಯಂತ ಹೆಚ್ಚು ಸಾವನ್ನುಂಟುಮಾಡುವ ಪ್ರಾಕೃತಿಕ ಕಾರಣವಾಗಿದೆ, ವರ್ಷ 2000 ದಿಂದ 2014ರ ಅವಧಿಯಲ್ಲಿ ಭಾರತದಲ್ಲಿ ಸಿಡಿಲಿನಿಂದ ಸಾವನ್ನಪ್ಪಿರುವರೆಂದು ವರದಿಯಾಗಿರುವವರ ಒಟ್ಟು ಸಂಖ್ಯೆಯು 32,743 ಆಗಿದೆ. ಇದಲ್ಲದೇ ಇನ್ನೂ ಅನೇಕ ಸಾವುಗಳು ವರದಿಯಾಗದೇ ಹೋಗುತ್ತವೆ.
ಭಾರತದಲ್ಲಿ ಅತಿ ಹೆಚ್ಚು ತೊಂದರೆಗೊಳಗಾಗುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ಒಡಿಶಾ, ಆಂಧ್ರ ಪ್ರದೇಶಗಳು ಪ್ರಮುಖವಾಗಿವೆ. ಇದರಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವ ಕೃಷಿಕರು ಮತ್ತು ಕೃಷಿ ಕಾರ್ಮಿಕರೇ ಹೆಚ್ಚು ಕರ್ನಾಟಕದಲ್ಲಿ ವರ್ಷ 2009 ರಿಂದ ಇದುವರೆಗೆ (9ವರ್ಷಗಳಲ್ಲಿ) ಒಟ್ಟು 593 ಜನ ಸಿಡಿಲಿಗೆ ಬಲಿಯಾಗಿದ್ದಾರೆಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಲಭ್ಯವಿರುವ ಅಂಕಿ ಅಂಶಗಳು ತಿಳಿಸುತ್ತವೆ. ಕರ್ನಾಟಕದಲ್ಲಿ ಬಹಳ ವಿಸ್ತಾರವಾದ ಸಮತಟ್ಟಾದ ಬಯಲು ಪ್ರದೇಶಗಳಿರುವ ಬಯಲು ಸೀಮೆಯ ಜಿಲ್ಲೆಗಳಲ್ಲಿ (ವಿಶೇಷವವಾಗಿ ಕಲಬುರ್ಗಿ, ಬೆಳಗಾವಿ, ಧಾರವಾಡ, ಚಿತ್ರದುರ್ಗ, ಬೀದರ್, ಹಾವೇರಿ, ತುಮಕೂರು, ರಾಯಚೂರು, ಇತ್ಯಾದಿ) ಕೃಷಿ ಕೆಲಸಗಳಲ್ಲಿ ತೊಡಗಿರುವವರು ಅಥವಾ ದನ, ಕುರಿ ಕಾಯುವವರು ಸಿಡಿಲಿನ ಆಘಾತಕ್ಕೆ ಒಳಗಾಗುವುದು ಹೆಚ್ಚಿದೆ.
ಪ್ರತಿ ವರ್ಷವೂ ಸಿಡಿಲಿನಿಂದ ಅನೇಕ ಸಾಕು ಪ್ರಾಣಿಗಳೂ ಸಹ ಸಾವಿಗೀಡಾಗುತ್ತವೆ. ಆದರೆ, ಇದರ ಜೊತೆಯಲ್ಲಿ ಎತ್ತರಕ್ಕೆ ಬೆಳೆಯುವ ಅನೇಕ ತೆಂಗಿನ ಮರಗಳು ಮತ್ತು ಅಡಿಕೆಯ ಇವುಗಳ ಬಗ್ಗೆ ಮಾಹಿತಿ ಸಂಗ್ರಹ ಹಾಗೂ ವರದಿಯಾಗುವುದು ಪರಿಪೂರ್ಣವಾಗಿಲ್ಲ. ಮರಗಳು ಸಿಡಿಲಿನಿಂದ ಹಾನಿಗೊಳಗಾಗುತ್ತವೆ. ಸಿಡಿಲಿನ ಆಘಾತವಾದಾಗ ಹೃದಯ ಸ್ಥಂಭನ ಅಥವಾ ನರವ್ಯವಸ್ಥೆಗೆ ಹಾನಿಯಾಗುವುದರಿಂದ ಸಾವು ಸಂಭವಿಸುತ್ತದೆ. ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ ಸಿಡಿಲಿನಿಂದ ತೀವ್ರತರ ಸುಟ್ಟಗಾಯಗಳಾಗುತ್ತವೆ. ಸಿಡಿಲಿನ ಆಘಾತಕ್ಕೊಳಗಾದ ವ್ಯಕ್ತಿಯನ್ನು ಮುಟ್ಟುವುದು ಯಾವುದೇ ರೀತಿಯಲ್ಲಿ ಆಪಾಯಕರವಲ್ಲ. ರಬ್ಬ ಶೂಗಳನ್ನು ಹಾಕಿಕೊಳ್ಳುವುದರಿಂದ ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಮೊಬೈಲ್ಹ್ಯಾಂ ಡ್ ಸೆಟ್‌ಗಳು ಸಿಡಿಲನ್ನು ಆಕರ್ಷಿಸುತ್ತವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಸಾಮಾನ್ಯವಾಗಿ ಅಂತರಿಕ್ಷದಲ್ಲಿ ಚಲಿಸುವ ವಿಮಾನಗಳ ಲೋಹದ ಹೊರ ಮೈ ಕವಚವು ಮೋಡಗಳಲ್ಲಿನ ಕಾಂತೀಯ ಶಕ್ತಿಯನ್ನು ತನ್ನ ಮೂಲಕ ಹರಿಯಲು ಬಿಡುವುದರಿಮದ ವಿಮಾನವು ಸಿಡಿಲಿನ ಆಘಾತಕ್ಕೆ ನೇರವಾಗಿ ಒಳಗಾಗುವುದು ಅತಿ ಕಡಿಮೆ.
ಆದರೆ, ಅಲ್ಲಿ ಉಂಟಾಗುವ ಅಗಾಧ ಕಾಂತೀಯ ಕ್ಷೇತ್ರದಿಂದ ವಿಮಾನದ ಒಳಗಿರುವ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಉಪಕರಣಗಳು ಸರಿಯಾಗಿ ಕೆಲಸ ಮಾಡದೇ ತೊಂದರೆಯಾಗಬಹುದು. ವಿಮಾನಗಳಿಗಿಂತ ಹೆಲಿಕಾಪ್ಟರ್‌ಗಳು ಸಿಡಿಲಿನ ಪ್ರಭಾವದಿಂದ ಹೆಚ್ಚಿನ ತೊಂದರೆಗೊಳಗಾಗುತ್ತವೆ.
ಸಿಡಿಲಿನಿಂದ ರಕ್ಷಣೆ:
ಸಿಡಿಲಿನ ಸಾಧ್ಯತೆಯನ್ನು ಮೊದಲೇ ತಿಳಿದು ಮುನ್ಸೂಚನೆ ಕೊಡಲು ಆಗುವುದಿಲ್ಲ. ಆದರೂ ಇತ್ತೀಚೆಗೆ ಒಂದು ಪ್ರದೇಶದಲ್ಲಿ ಸಿಡಿಲಿನ ಸಂಭಾವ್ಯತೆಯನ್ನು ತಿಳಿದು ಸುಮಾರು ಅರ್ಧ ಗಂಟೆ ಮೊದಲೇ ಮುನ್ಸೂಚನೆ ನೀಡುವ ವೈಜಾನಿಕ ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ. ಈ ಪ್ರಯತ್ನಗಳು ಸಫಲವಾದರೆ, ಸಿಡಿಲಿನಿಂದಾಗುವ ಸಾವುಗಳನ್ನು ಬಹಳಷ್ಟು ತಪ್ಪಿಸಬಹುದೆನ್ನಿಸುತ್ತದೆ. ಸಿಡಿಲುಗಳು ಇದ್ದಕ್ಕಿದ್ದಂತೆ ಬರುವುದಿಲ್ಲ. ಬಿಸಿ ತೇವಭರಿತ ವಾತಾವರಣವಿರುವ ದಿನಗಳ ಮಧ್ಯಾಹ್ನದ ವೇಳೆಯಲ್ಲಿ ದಟ್ಟವಾದ ಕ್ಯುಮುಲೋ- ನಿಂಬಸ್ ಮೋಡಗಳು ಮೇಳೆಸಿದಾಗ, ಸಾಮಾನ್ಯ ತಿಳುವಳಿಕೆಯುಳ್ಳ ಮನುಷ್ಯನಿಗೂ ಸಿಡಿಲು ಬರುವ ಸಂಭಾವ್ಯತೆಯ ಬಗ್ಗೆ ತಿಳಿಯುತ್ತದೆ. ಅಂತಹ ಸಂದರ್ಭಗಳಲ್ಲಿ ಬಯಲು ಪ್ರದೇಶಗಳಲ್ಲಿರುವವರು, ಹೊರಾಂಗಣದಲ್ಲಿರುವವರು ತಪ್ಪದೇ ಈ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಬೇಕು.
1)ಆದಷ್ಟು ಬೇಗ ಸುಸಜ್ಜಿತ ಮನೆಯೊಳಗೆ ಅಥವಾ ಲೋಹದ ಕವಚವುಳ್ಳ ವಾಹನದೊಳಗೆ ಸೇರಿಕೊಂಡು ಎಲ್ಲಾ ಕಿಟಕಿ, ಬಾಗಿಲುಗಳನ್ನು ಸಂದು ಬಿಡದಂತೆ ಮುಚ್ಚಿಕೊಳ್ಳಿ. ತೆರೆದ ಕಿಟಕಿ ಬಾಗಿಲುಗಳಿಂದ ಸಿಡಿಲು ನುಸುಳಬಲ್ಲದು.
2) ಆ ಸಮಯದಲ್ಲಿ ಯಾವುದೇ ಲೋಹದ ಭಾಗಗಳನ್ನು ದೇಹಕ್ಕೆ ತಾಗಿಸಿಕೊಳ್ಳಬೇಡಿ ಲೋಹದ ಹಿಡಿಯಿರುವ ಛತ್ರಿಯನ್ನೂ ಹಿಡಿಯುವುದು ಬೇಡ.
3) ಭಾರತದಲ್ಲಿ ಸಿಡಿಲಿನಿಂದಾಗುವ ಸಾವುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳು ಜನರು ಬಿರುಮಳೆಯಿಂದ ರಕ್ಷಣೆಗೆ ಮರದ ಕೆಳಗೆ ನಿಂತಾಗ ಆಗಿವೆ. ಸಿಡಿಲು ಬರುವಂತಹ ವಾತಾವರಣದಲ್ಲಿ ಹೊರಾಂಗಣದಲ್ಲಿರುವವರು ಮರದ ಕೆಳಗೆ ರಕ್ಷಣೆ ಪಡೆಯುವುದು ಬೇಡ. ಕೆಲವು ಬಾರಿ ಸಿಡಿಲು ಮರದ ರಂಬೆಗಳನ್ನೇ ಕತ್ತರಿಸಿ ಬೀಳಿಸಬಹುದು.
4) ಯಾವುದೇ ಕಟ್ಟಡ ಅಥವಾ ವಾಹನದ ಆಸರೆಯಿಲ್ಲದೇ ತೆರೆದ ಬಯಲು ಪ್ರದೇಶದಲ್ಲಿರುವವರು , ತಾವು ಅತಿ ಎತ್ತರದ ಪ್ರದೇಶದಲ್ಲಿ ಇರದಂತೆ ನೋಡಿಕೊಳ್ಳಿ. ಉದಾಹರಣೆಗೆ ಗುಡ್ಡ ಬೆಟ್ಟಗಳ, ಕೋಡುಗಲ್ಲಿನ ಅಥವಾ ಮಣ್ಣಿನ ಗುಡ್ಡೆಯ ಮೇಲ್ತುದಿಯಲ್ಲಿ ಇರುವುದನ್ನು ಸಂಪೂರ್ಣ ತಪ್ಪಿಸಿ, ಆದಷ್ಟು ಬೇಗನೇ ಕೆಳಗಿನ ಪ್ರವೇಶಕ್ಕೆ ಚಲಿಸಿರಿ.
5). ಸಿಡಿಲು ಬಡಿಯುವ ಸಂದರ್ಭದಲ್ಲಿ ನೀರಿನ ಕೊಳಗಳು ಅಪಾಯಕಾರಿ. ಕೊಳಗಳಿಂದ ಮೊದಲು ಹೊರಬನ್ನಿ,
6). ತರದ ಬಯಲಿನಲ್ಲಿಯೇ ಇರುವುದು ಅನಿವಾರ್ಯವಾದರೆ, ಯಾವ ಕಾರಣಕ್ಕೂ ನಿಂತುಕೊಳ್ಳಬೇಡಿ, ಬದಲಿಗೆ, ತಲೆಯನ್ನು ಮಂಡಿಗಳ ಮಧ್ಯೆ ಹುದುಗಿಸಿಕೊಂಡು ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುವುದು ಕ್ಷೇಮಕರ. ಆ ಸಮಯದಲ್ಲಿ ತೆರೆದ ನೆಲದ ಮೇಲೆ ಮಲಗುವುದೂ ಸರಿಯಲ್ಲ.
7). ಗುಂಪಿನಲ್ಲಿರಬೇಕಾದ ಸಂದರ್ಭ ಬಂದಾಗ ಎಲ್ಲರೂ ಒಟ್ಟಿಗೆ ನಿಲ್ಲಬೇಡಿ, ಬಿಡು ಬಿಡುವಾಗಿ ದೂರ ದೂರದಲ್ಲಿ ಕುಳಿತುಕೊಳ್ಳಿ, ಅಕ್ಟೋಬರ್ 2017 ರಲ್ಲಿ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಬಯಲಿನಲ್ಲಿ ದನಕಾಯುತ್ತಿದ್ದ ಆರು ಜನರು ಒಂದು ಬಾಗಿಲು ಇಲ್ಲದ ಚಿಕ್ಕ ದೇವಸ್ಥಾನದಲ್ಲಿ ಒಟ್ಟಿಗೆ ಆಸರೆ ಪಡೆದಿದ್ದಾಗ ಬಂದೆರಗಿದ ಸಿಡಿಲು ಆರು ಜನರನ್ನೂ ಬಲಿ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
8) ಸಿಡಿಲಿನ ಸಂಭವವಿರುವ ಸಮಯದಲ್ಲಿ ಮಳೆಯಿಂದ ತೊಟ್ಟ ಬಟ್ಟೆಗಳು ನೆನೆದರೆ ಚಿಂತೆ ಬೇಡ, ಇದರಿಂದ ಕಾಂತೀಯ ಶಕ್ತಿಯು ಸುಲಭವಾಗಿ ಹೊರ ಹರಿಯುವುದರಿಂದ ಆಘಾತವು ಕಡಿಮೆಯಾಗಬಹುದು.
9). ಬಲವಾದ ಸಿಡಿಲು ಅಪ್ಪಳಿಸುವುದಕ್ಕಿಂತ ಕೆಲವು ಕ್ಷಣಗಳು ಮೊದಲು ಸೈಪ್ಲೀ ಡರ್’ ಎನ್ನುವ ಒಂದು ಕಿರು ಮಿಂಚು ಮೋಡದಿಂದ ಭೂಮಿಗೆ ಸಂಪರ್ಕ ಸೇತುವನ್ನು ಏರ್ಪಡಿಸುತ್ತದೆ. ಈ ಸಮಯದಲ್ಲಿ ಮನುಷ್ಯರು ಅದರ ಹತ್ತಿರವಿದ್ದರೆ, ಅವರ ಕೂದಲುಗಳು ನಿಮಿರಿ ನಿಲ್ಲಬಹುದು, ಕಿವಿಯಲ್ಲಿ ಗುಂಯ್‌ಗುಡುವ ಅಥವಾ ಸಿಡಿಯುವ ಶಬ್ದ ಕೇಳಿಸಬಹುದು. ಅಥವಾ ಹತ್ತಿರದಲ್ಲಿರುವ ಎತ್ತರದ ವಸ್ತುಗಳ ಮೇಲ್ತುದಿಗಳಲ್ಲಿ ಹೊಳಪು ಕಾಣಿಸಿಕೊಳ್ಳಬಹುದು. ಈ ಸೂಚನೆಗಳು ದೊರೆತರೆ, ತಕ್ಷಣವೇ ಆ ಸ್ಥಳದಿಂದ ದೂರ ಹೋಗುವುದು ಕ್ಷೇಮಕರ.
10). ಮನೆಯ ಒಳಗಿರುವಾಗ ಆದಷ್ಟೂ ಎಲ್ಲಾ ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳ ಸಂಪರ್ಕವನ್ನು ಕಿತ್ತು ಹಾಕಿ, ವಿಶೇಷವಾಗಿ ದೂರದರ್ಶನ ಉಪಕರಣ, ರೆಫ್ರಿಜಿರೇಟರ್, ಕಂಪ್ಯೂಟರ್ ಇವುಗಳ ಬಗ್ಗೆ ಎಚ್ಚರ ವಹಿಸಿ, ಮೊಬೈಲ್‌ಗಳನ್ನು ಛಾರ್ಜ್ ಮಾಡಲು ಇಡಬೇಡಿ, ಸಿಡಿಲು ಸಮೇತ ಮಳೆಯಾಗುತ್ತಿರುವ ಸಂದರ್ಭದಲ್ಲಿ ಸ್ಥಿರ ದೂರವಾಣಿ ಉಪಕರಣಗಳನ್ನು ಬಳಸಬೇಡಿ.
ಬೆಂಜಮಿನ್ ಫ್ರಾಂಕ್ಲಿನ್ ಎನ್ನುವ ಅಮೆರಿಕನ್ ವಿಜ್ಞಾನಿಯು 18ನೆಯ ಶತಮಾನದಲ್ಲಿ ನಡೆಸಿದ ಅನೇಕ ಪ್ರಯೋಗಗಳ ಫಲಶ್ರುತಿಯಾಗಿ ಸಿಡಿಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಯಿತು. ಅದರಂತೆ, ಎತ್ತರದ ಕಟ್ಟಡಗಳಿಗೆ ಸಿಡಿಲಿನ ಹಾವಳಿಯನ್ನು ತಪ್ಪಿಸಲು, ಆ ಕಟ್ಟಡದ ಮೇಲ್ತುದಿಗೆ ಒಂದು ಲೋಹದ ಪಟ್ಟಿಯನ್ನು ಕೊಟ್ಟು ಅದನ್ನು ಸೂಕ್ತ ವಿದ್ಯುತ್ ವಾಹಕಗಳ ಮೂಲಕ ಭೂಮಿಗೆ ಸಂಪರ್ಕ ಬರುವಂತೆ ಮಾಡುವುದರಿಂದ ಕಟ್ಟಡಗಳನ್ನು ರಕ್ಷಿಸಬಹುದೆಂದು ತಿಳಿದು, ಅಂದಿನಿಂದ ಈ ತಂತ್ರವನ್ನು ಜಗತ್ತಿನಾದ್ಯಂತ ಬಳಸಲಾಗುತ್ತಿದೆ.