ಪರಂಗಿಹಣ್ಣಿನ ಔಷಧೀಯ ಗುಣಗಳು ಹಾಗೂ ಅನುಕೂಲಗಳು
ಪರಂಗಿಮರ : ಕ್ಯಾರಿಕಾ ಪಪಾಯ, ಸಸ್ಯದ ಕುಟುಂಬ : ಕ್ಯಾರಿಕೇಸಿ [Caricaceae], ಕನ್ನಡದ ಇತರ ಹೆಸರುಗಳು : ಅಕ್ಕತಂಗಿ ಹಣ್ಣು, ಅಂಡಕರ್ಬೂಜ, ಪಪ್ಪಂಗಾಯಿ, ಪರಂಗಿಹಣ್ಣು, ಪೆಂಗ, ಬಪ್ಪಂಗಾಯಿ
ಪರಿಚಯ
ಈ ಮರದ ತೌರೂರು ದಕ್ಷಿಣ ಅಮೇರಿಕ ಮತ್ತು ವೆಸ್ಟ ಇಂಡೀಸ್. ಈ ಹಣ್ಣಿನ ಮರವನ್ನು ಕ್ರಿ.ಶ. 1626ಕ್ಕೆ ಮೊದಲೆ ಭಾರತಕ್ಕೆ ಪೋರ್ಚುಗೀಸರು ತಂದರೆಂದು ತಿಳಿದು ಬರುತ್ತದೆ. ಜನಪ್ರಿಯವಾದ ಫಲವೃಕ್ಷವನ್ನು ರಾಜ್ಯದಲ್ಲೆಲ್ಲಾ ಬೆಳೆಯಲಾಗುತ್ತಿದೆ.
ಪಪ್ಪಾಯ ಸದಾ ಹಸಿರಾಗಿರುವ ಒಂದು ಸಣ್ಣಮರ, ಇದರ ಬಲಿತ ಕಾಂಡ ಟೊಳ್ಳಾಗಿರುತ್ತದೆ. ಕಾಂಡದ ತುದಿಯಲ್ಲಿ ಎಲೆಗಳು ಒತ್ತಾಗಿ ಜೋಡಣೆಯಾಗಿರುತ್ತವೆ. ಸರಳವಾದ ಎಲೆಗಳು ಹಸ್ತಾಕಾರವಾಗಿ ಸೀಳಿರುತ್ತವೆ. ಪ್ರತಿ ಎಲೆಗೂ ಉದ್ದನೆಯ ಟೊಳ್ಳಾದ ತೊಟ್ಟಿರುತ್ತದೆ. ಎಲೆಯುದುರಿದ ನಂತರ ಕಾಂಡದ ಮೇಲೆ ಎಲೆ ಇದ ಕುರುಹಾಗಿ ವಜ್ರದಾಕಾರದ ಗುರುತು ಉಳಿಯುತ್ತದೆ. ಮರವು ಹೆಣ್ಣು, ಗಂಡು ಮತ್ತು ದ್ವಿಲಿಂಗಿ ಎಂಬ ಮೂರು ಬಗೆಯ ಹೂಗಳನ್ನು ಬಿಡುತ್ತದೆ. ಕೆಲವು ಬಾರಿ ಈ ಹೂಗಳು ಪ್ರತ್ಯೇಕವಾಗಿ ಬೇರೆ ಬೇರೆ ಮರಗಳಲ್ಲೂ ಬಿಡುವುದುಂಟು. ಇದರಿಂದಾಗಿ ಹೂ ಬಿಡವವರೆಗೂ ಮರದ ಲಿಂಗ ತಿಳಿದು ಬರುವುದಿಲ್ಲ. ಪರಂಗಿಯಲ್ಲಿ ಹಲವಾರು ತಳಿಗಳಿವೆ. ಅವುಗಳಲ್ಲಿ ವಾಷಿಂಗ್ ಟನ್, ಹನಿದ್ರೂ ಅಥವಾ ಕೂರ್ಗ್ ಹನಿಡ ಮುಖ್ಯವಾದವುಗಳು, ತಳಿಗಳ ಭೇದವೆಣಿಸಿದ ಔಷಧ ತಯಾರಿಕೆಯಲ್ಲಿ ಎಲ್ಲವನ್ನು ಬಳಸಬಹುದು.
ಉಪಯೋಗಗಳು
1. ಪರಂಗಿಯ ಎಲೆಯನ್ನು ಅರೆದು ಕಟ್ಟುವುದರಿಂದ ಅಥವಾ ಲೇಪಿಸುವುದರಿಂದ ನರಗಳ ನೋವು ಕಡಿಮೆಯಾಗುತ್ತದೆ. ಬಿದ್ದು ನೋವಾಗಿರುವ ಕಡೆಲೇಪಿಸಿದರೂ ನೋವು ಕಡಿಮೆಯಾಗುತ್ತದೆ.
2. ಪರಂಗಿಯ ಎಲೆಯನ್ನು ಹೆಂಚಿನ ಮೇಲೆ ಅಥವಾ ಕೆಂಡದ ಮೇಲೆ ಬಾಡಿಸಿ ಬಾವು ಅಥವಾ ನೋವಿರುವ ಕಡೆ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ.
3. ಪರಂಗಿ ಹೂವುಗಳನ್ನು ಕೈಯಲ್ಲಿ ಹೊಸಕಿ, ಕಟ್ಟಿರುವೆ ಮತ್ತು ಇತರ ಹುಳುಗಳು ಕಡಿದಿರುವ ಸ್ಥಳಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ಎಳೆಯ ಪರಂಗಿ ಕಾಯಿಯನ್ನು ತೆಗೆದುಕೊಂಡು ಅದರ ಹೊರಮೈ (ಸಿಪ್ಪೆಯ)
4. ಮೇಲೆ ಹರಿತವಾತ ಚಾಕುವಿನಿಂದ ಗಾಯ ಮಾಡಿದರೆ ಬಿಳಿಯ ಹಾಲು ಹೊರಬರುತ್ತದೆ ಇದನ್ನು ಸ್ಟೀಲ್ ಬಟ್ಟಲಿನಲ್ಲಿ ಸಂಗ್ರಹಿಸಿಕೊಂಡು ಬೆಂಕಿಯ ಮೇಲಿಟ್ಟರೆ ಬಿಳಿಯ ಚೂರ್ಣವಾಗುತ್ತದೆ. ಚೂರ್ಣವನ್ನು 24 ಗಂಟೆಗಳವರೆಗೆ ಅದರಲ್ಲಿಯೇ ಬಿಟ್ಟು ನಂತರ ಬಾಟಲ್ ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಚೂರ್ಣವನ್ನು ದೊಡ್ಡವರಿಗೆ ಒಂದು ಸಲಕ್ಕೆ ಎರಡು ಗೋಧಿ ಕಾಳಿನಷ್ಟನ್ನು ಸಕ್ಕರೆಯೊಡನೆ ಅಥವಾ ಹಾಲಿನೊಡನೆ ಊಟವಾದ ನಂತರ ಕೊಡುವುದರಿಂದ ಸ್ನೇಹ (Spleen) ಮತ್ತು ಯಕೃತ್ತಿನ (Liver) ದೋಷವು ಪರಿಹಾರವಾಗಿ ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
5. ಎಳೆಪರಂಗಿ ಕಾಯಿಯಿಂದ ಸುರಿವ ಹಾಲಿಗೆ ಪಟಿಕದ ಚೂರ್ಣ ಸೇರಿಸಿ ಹಚ್ಚುವುದರಿಂದ ಕಲ್ಲೊತ್ತು (Corns) ಮತ್ತು ನರೋಲಿ (Warts) ವಾಸಿಯಾಗುತ್ತವೆ.
6. ಪರಂಗಿಮರದ ಎಳೆಕಾಯಿಯನ್ನು ಕಚ್ಚು ಮಾಡಿದಾಗ ಒಸರುವ ಹಾಲನ್ನು ಚೇಳು ಕಡಿದ ಜಾಗದ ಮೇಲೆ ಲೇಪಿಸುವುದರಿಂದ ವಿಷವು ಇಳಿಯುತ್ತದೆ.
7. ಪರಂಗಿಕಾಯಿಯ ಹಾಲನ್ನು ಸಂಗ್ರಹಿಸಿ ತಕ್ಕಷ್ಟು ಜೇನುತುಪ್ಪ ಸೇರಿಸಿ ತಿನ್ನಿಸುವುದರಿಂದ ಜಂತುಹುಳುಗಳು ಬೀಳುತ್ತವೆ. ವಯಸ್ಸಿಗೆ ತಕ್ಕಂತೆ ಪ್ರಮಾಣವನ್ನು ನಿಗದಿಪಡಿಸಿಕೊಳ್ಳಬೇಕು. ಒಣಗಿದ ಬೀಜದ ಚೂರ್ಣವನ್ನು ಬೆಲ್ಲದೊಡನೆ ತಿನ್ನಿಸುವುದರಿಂದಲೂ ಜಂತುಹುಳುಗಳು ಬೀಳುತ್ತವೆ.
8. ಪರಂಗಿಕಾಯಿಯ ಹಾಲನ್ನು ಹಚ್ಚುವುದರಿಂದ ನವೆ, ಕಜ್ಜಿ ಮತ್ತು ಹುಳುಕಡ್ಡಿ ಗುಣವಾಗುತ್ತವೆ.
9. ಪರಂಗಿಹಣ್ಣನ್ನು ಮಾತ್ರ ನಿತ್ಯ ಬೆಳಗ್ಗೆ ಸೇವಿಸಿ (ಉಪಹಾರಕ್ಕೆ ಬೇರೇನನ್ನೂ ತಿನ್ನದೆ) ಮೇಲೆ ಬಿಸಿ ನೀರು ಕುಡಿಯುವುದರಿಂದ ಅರುಚಿ, ಅಜೀರ್ಣ ನಿವಾರಣೆಯಾಗುತ್ತದೆ.
10. ಪರಂಗಿ ಗಿಡದ ಅಥವಾ ಎಳೆ ಕಾಯಿಯ ಹಾಲನ್ನು ಒಂದು ಚಮಚ ಸಂಗ್ರಹಿಸಿ ಅದಕ್ಕೆ ಸಕ್ಕರೆ ಸೇರಿಸಿ ನಿತ್ಯ 2 ಹೊತ್ತಿನಂತೆ 2-3 ವಾರ ಸೇವಿಸುವುದರಿಂದ\ ಪಚನ ಶಕ್ತಿ ಹೆಚ್ಚಾಗುತ್ತದೆ. ಸ್ತ್ರೀಯರಲ್ಲಿ ಅನ್ಯ ಕಾರಣದಿಂದ ಮುಟ್ಟು ತಡೆಯಾಗಿದ್ದರೆ ಮುಟ್ಟು ಪ್ರಾರಂಭವಾಗುತ್ತದೆ.
11. ಪರಂಗಿಯ ಬಲಿತ ಕಾಯಿಯನ್ನು ಸಿಪ್ಪೆ ತೆಗೆದು ಹೋಳು ಮಾಡಿ ಸ್ವಲ್ಪ ಉಪ್ಪು ಸೇರಿಸಿ ನಿತ್ಯ ಬೆಳಗ್ಗೆ – ರಾತ್ರಿ ಚೆನ್ನಾಗಿ ಅಗಿದು ತಿನ್ನಬೇಕು. ಒಂದು ಹೊತ್ತಿಗೆ 10-12 ತೊಲದಂತೆ 21-42 ದಿವಸ ಸೇವಿಸುವುದರಿಂದ ಗುಲ್ಕ ಪರಿಹಾರವಾಗುತ್ತದೆ.
12. ಪರಂಗಿಬೀಜ 6 ತೊಲ, ಹಿಪ್ಪಲಿ 6 ತೊಲ, ನವಾಸಾಗರ 6 ತೋ ಇವುಗಳಲ್ಲೆವನ್ನು ಅರೆದು ಬೆಲ್ಲ ಸೇರಿಸಿ ಕಲಸಿಟ್ಟುಕೊಂಡು ಪ್ರತಿನಿತ್ಯ ಬೆಳಗ್ಗೆ ಒಂದೊಂದು ತೊಲದಂತೆ 21-42 ದಿವಸ ತಿನ್ನುವುದರಿಂದ ಮಲೇರಿಯಾ ಗಡ್ಡೆ ಮತ್ತು ಜ್ವರ ವಾಸಿಯಾಗುತ್ತದೆ.
ಪರಂಗಿ ಬೀಜದ ಬದಲಾಗಿ ದೋರೆಗಾಯಿಯನ್ನು ಉಪಯೋಗಿಸಬಹುದು. ಪಶುರೋಗ ಚಿಕಿತ್ಸೆಯಲ್ಲಿ ಎಳೆ ಪರಂಗಿ ಕಾಯಿಯನ್ನು ತುರಿದು ರುಬ್ಬಿ 42 ದಿವಸ ತಿನ್ನಿಸುವುದರಿಂದ ಗೂಬೆರೋಗ ವಾಸಿಯಾಗುತ್ತದೆ.